ಕಾಂಗರೂ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಅರೆಬೆಳೆದ ಮರಿಗಳನ್ನು ಹೆತ್ತು ಅವನ್ನು ತಮ್ಮ ಹೊಟ್ಟೆಯಲ್ಲಿನ ಚೀಲದಲ್ಲಿ ಹೊತ್ತು ಬೆಳೆಸುವ ಅನೇಕ ಪ್ರಾಣಿಜಾತಿಗಳಲ್ಲಿ ಒಂದು. ಅನೇಕ ವಿಚಿತ್ರಪ್ರಾಣಿಗಳಿಗೆ ಹೆಸರಾದ ಆಸ್ಟ್ರೇಲಿಯ ಇದರ ತವರು. ಟಾಸ್ಮೇನಿಯ ದ್ವೀಪದಲ್ಲೂ ಕಾಂಗರೂ ಕಾಣಬರುತ್ತದೆ. ಇದು ಮಾಸ್ರ್ಯೂಪಿಯೇಲಿಯ ಗಣಕ್ಕೂ ಮ್ಯಾಕ್ರೋಪೋಡಿಡೀ ಕುಟುಂಬಕ್ಕೂ ಸೇರಿದೆ. ತುಂಬ ವಿಚಿತ್ರ ಪ್ರಾಣಿಯಿದು. ನೆಗೆಯಲು ಅನುಕೂಲವಾದ ಉದ್ದನೆಯ ಹಾಗೂ ಬಲವಾದ ಹಿಂಗಾಲುಗಳು, ಮಾಂಸಲವಾಗಿ ಬೆಳೆದ ಉದ್ದವಾದ ಬಾಲ, ಮರಿಗಳನ್ನು ಹೊತ್ತು ಸಾಗಲು ಮತ್ತು ಪೋಷಿಸಲು ಅನುಕೂಲವಾದ ಹೊಟ್ಟೆಯ ಚೀಲ ಇದರ ವೈಶಿಷ್ಟ್ಯಗಳು.  ಬಾಲ ಬುಡದಲ್ಲಿ ದಪ್ಪವಾಗಿಯೂ ತುದಿಯಲ್ಲಿ ಮೊನಚಾಗಿಯೂ ಇದೆ. ಕಾಂಗರೂ ಕುಳಿತಾಗ ತನ್ನ ಹಿಂಗಾಲುಗಳನ್ನೂ ಬಾಲವನ್ನೂ ಒಂದು ಬಗೆಯ ಊರೆಯಾಗಿ ಉಪಯೋಗಿಸಿಕೊಂಡು ವಿಚಿತ್ರ ಭಂಗಿಯಲ್ಲಿ ಕುಳಿತುಕೊಳ್ಳುತ್ತದೆ. ಅಲ್ಲದೆ ಓಡುವಾಗ ನಿಂತು ತನ್ನ ಬಲವಾದ ಕಾಲುಗಳನ್ನೂರಿ ಕುಪ್ಪಳಿಸುತ್ತ ಹೋಗುತ್ತದೆ. ನೆಗೆಯುವುದರಲ್ಲಿ ಬಲು ಕುಶಲಿ. ಒಂದು ನೆಗೆತಕ್ಕೆ ಸುಮಾರು 25` ದೂರ ಕ್ರಮಿಸಬಲ್ಲುದು; 9` ಎತ್ತರ ಹಾರಬಲ್ಲ ಸಾಮಾಥ್ರ್ಯವೂ ಇದೆ.

 ಪೂರ್ಣಬೆಳೆದ ಕಾಂಗರೂ ಸುಮಾರು 8` ಉದ್ದ ಬೆಳೆದು ಸುಮಾರು 200 ಪೌಂ. ತೂಗುತ್ತದೆ. ಮೈಮೇಲೆಲ್ಲ ಕಂದು ಅಥವಾ ಬೂದಿಬಣ್ಣದ ಉಣ್ಣೆಯಂಥ ಕೂದಲಿದೆ. ಮೂತಿ ಹೆಚ್ಚುಕಡಿಮೆ ನಾಯಿಯಂತೆ. ಬಾಯಿ ಚಿಕ್ಕದು; ತುಟಿಗಳು ಮುಂಚಾಚಿವೆ. ಕಿವಿಗಳು ದೊಡ್ಡವು, ದುಂಡಗಿವೆ; ಹಿಂದಕ್ಕೂ ಮುಂದಕ್ಕೂ ಚಲಿಸಬಲ್ಲುವು. ಮುಂಗಾಲುಗಳು ಬಲು ಚಿಕ್ಕವು. ಎಲ್ಲ ಕಾಂಗರೂಗಳಿಗೂ ಮುಂಭಾಗದಲ್ಲಿ ತೆರೆಯುವಂಥ ಹೊಟ್ಟೆಯ ಚೀಲವಿದೆ. ಈ ಚೀಲದ ಒಳಗೆ 4 ಮೊಲೆತೊಟ್ಟುಗಳಿವೆ.

 ಕಾಂಗರೂಗಳು ಹೆಚ್ಚಾಗಿ ಬಯಲಿನಲ್ಲೆ ವಾಸಮಾಡುತ್ತವೆ. ಸಾಮಾನ್ಯವಾಗಿ ಜೊತೆಯಾಗಿಯೋ ದೊಡ್ಡ ದೊಡ್ಡ ಹಿಂಡುಗಳಲ್ಲಿಯೋ ವಾಸಿಸುತ್ತವೆ. ಒಂದೊಂದು ಹಿಂಡಿನಲ್ಲಿ 50-60 ಪ್ರಾಣಿಗಳಿರುವುದೂ ಉಂಟು. ಪ್ರತಿಯೊಂದು ಹಿಂಡಿಗೂ ಅದರದೇ ಆದ ಅನ್ನಕ್ಷೇತ್ರವಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುವಾಗ ಮುಂದಾಳನ್ನು ಹಿಂಡಿನ ಉಳಿದ ಪ್ರಾಣಿಗಳು ಅನುಸರಿಸುತ್ತವೆ. ಕಾಂಗರೂಗಳು ಸ್ವಾಭಾವಿಕವಾಗಿ ಬಹಳ ಶಾಂತಸ್ವಭಾವದ ಪ್ರಾಣಿಗಳು. ಪುಕ್ಕಲುಸ್ವಭಾವದವೆಂದೇ ಹೇಳಬಹುದು. ಬೆದೆಗಾಲದಲ್ಲಿ ಮಾತ್ರ ಇತರ ಪ್ರಾಣಿಗಳೊಂದಿಗೆ ಕ್ರೂರವಾಗಿ ಹೋರಾಡಬಲ್ಲುವು. ಇವುಗಳ ಹಿಂಗಾಲಿನೊದೆತ ಸಾಮಾನ್ಯವಾದ ಏಟಲ್ಲ. ಹೋರಾಡುವಾಗ ಇವು ನಿಮಿರಿನಿಂತು ಬಾಲವನ್ನೂ ಒಂದು ಕಾಲನ್ನೂ ನೆಲಕ್ಕೂರಿ ಮತ್ತೊಂದು ಕಾಲಿನಿಂದ ರಪರಪನೆ ಒದೆಯುತ್ತವೆ.

ಕಾಂಗರೂಗಳು ಸಸ್ಯಾಹಾರಿಗಳು. ಹುಲ್ಲು, ಗಿಡಗಳ ಚಿಗುರು ಇವುಗಳ ಪ್ರಧಾನ ಆಹಾರ. ಗರ್ಭಧಾರಣೆಯ ಕಾಲ ಬಲುಕಿರಿಯದು. ಅದರ ಅವಧಿ ಸುಮಾರು 3 ವಾರ ಮಾತ್ರ.  ಒಂದು ಸೂಲಿಗೆ ಒಂದೇ ಮರಿ ಹುಟ್ಟುತ್ತದೆ. ಆಗತಾನೇ ಹುಟ್ಟಿದ ಮರಿ ತುಂಬ ಚಿಕ್ಕದು. ಸುಮಾರು ಒಂದು ಅಂಗುಲ ಉದ್ದವಿರುತ್ತದೆ. ಕಣ್ಣು ತೆರೆದೇ ಇರುವುದಿಲ್ಲ. ಮೈಮೇಲೆ ಕೂದಲಿನ ಹೊದಿಕೆಯೂ ಇರುವುದಿಲ್ಲ.  ಹೀಗೆ ಅಪೂರ್ಣಾವಸ್ಥೆಯಲ್ಲಿ ಹುಟ್ಟುವ ಮರಿಯ ಉಳಿದ ಬೆಳೆವಣಿಗೆಯೆಲ್ಲ ತಾಯಿಯ ಹೊಟ್ಟೆಯ ಚೀಲದಲ್ಲಿಯೆ. ಮರಿ ಹುಟ್ಟಿದ ತತ್‍ಕ್ಷಣ ತನ್ನ ಮುಂಗಾಲುಗಳ ಸಹಾಯದಿಂದ ತಾಯಿಯ ಹೊಟ್ಟೆಚೀಲದೊಳಕ್ಕೆ ಹತ್ತಿಹೋಗುತ್ತದೆ.  ಚೀಲದೊಳಕ್ಕೆ ಹೋದ ಅನಂತರ ಯಾವುದಾದರೊಂದು ಮೊಲೆತೊಟ್ಟನ್ನು ಬಾಯಿಯಿಂದ ಕಚ್ಚಿಕೊಳ್ಳುತ್ತದೆ. ಈ ಸ್ಥಿತಿಯಲ್ಲಿ ಸುಮಾರು 3 ತಿಂಗಳು ಕಾಲ ಕಳೆದು ತನ್ನ ಬೆಳೆವಣಿಗೆಯನ್ನು ಪೂರ್ಣಗೊಳಿಸುತ್ತದೆ. ಅನಂತರ ಅದು ಚೀಲದಿಂದ ಹೊರಗೆ ಬಂದು ತನ್ನ ಸ್ವಂತ ಬದುಕನ್ನು ನಡೆಸಲು ಪ್ರಾರಂಭಿಸಬಲ್ಲುದು. ಆದರೆ ಮುಂದೆಯೂ ಹಲವಾರು ತಿಂಗಳು ಕಾಲ ತಾಯಿಯೊಡನೆಯೇ ಇದ್ದು ಆಪತ್ತೊದಗಿದಾಗ ಪುನಃ ತನ್ನ ಈ ರಕ್ಷಣಾಸ್ಥಾನಕ್ಕೆ ಮರಳಬಹುದು.

 ಕಾಂಗರೂಗಳಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಜಾತಿಗಳಿವೆ. ಇವುಗಳಲ್ಲಿ ಮುಖ್ಯವಾದವು ಇವು: 1 ಮ್ಯಾಕ್ರೋಪಸ್ ಜೈಗಾಂಟಿಯಸ್ ಎಂಬ ದೊಡ್ಡ ಗಾತ್ರದ ಕಾಂಗರೂ. ಇದರ ಬಣ್ಣ ಬೂದಿ. ಪೂರ್ವ ಹಾಗೂ ಪಶ್ಚಿಮ ಆಸ್ಟ್ರೇಲಿಯ ಮತ್ತು ಟಾಸ್ಮೇನಿಯಗಳಲ್ಲಿ ಜೀವಿಸುತ್ತದೆ. 2 ಮ್ಯಾಕ್ರೋಪಸ್ ರೂಫಸ್ (ಕೆಂಪು ಬಣ್ಣದ ಕಾಂಗರೂ). ಆಸ್ಟ್ರೇಲಿಯದ ಒಳನಾಡಿನ ವಾಸಿ ಇದು. ಇವಲ್ಲದೆ ಮ್ಯಾಕ್ರೋಪೋಡಿಡೀ ಕುಟುಂಬಕ್ಕೆ ಸೇರಿದ ಡೆಂಡ್ರೊಲೇಗಸ್ (ಟ್ರೀ ಕಾಂಗರೂ, ವಾಲಬೀಯ (ವಾಲಬೀ), ಪೆಟ್ರೊಗೇಲ್ (ರಾಕ್ ವಾಲಬೀ), ಡಾರ್ಕಾಪ್ಸಿಸ್ ಮುಂತಾದ ಜಾತಿಯ ಪ್ರಾಣಿಗಳನ್ನೂ ಸಾಮಾನ್ಯ ಭಾಷೆಯಲ್ಲಿ ಕಾಂಗರೂಗಳೆಂದೇ ಕರೆಯುತ್ತಾರೆ.

 

(ಎ.)